ಮಡಿಕೇರೀಲಿ ಮಂಜು
ಬೂಮಿನ್ ತಬ್ಬಿದ ಮೊಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಲ್ ತಿಟ್ಟಿಲ್ದಂಗೆ
ಮಡಿಕೇರೀಲಿ ಮಂಜು || ಪ ||
ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡಗೋದಂಗೆ
ಅಳ್ಳಾಡಾಲ್ದು ಮಂಜು || 1 ||
ತಾಯಿ ಮೋಗಿನ್ ಎತ್ಕೊಂಡಂಗೆ
ಒಂದಕ್ಕೊಂದು ಅತ್ಕೊಂಡಂಗೆ
ಮಡಿಕೇರೀನ ಎದೆಗೊತ್ಕೊಂಡಿ
ಜೂಗೀಡ್ಸ್ತಿತ್ತು ಮಂಜು || ೨ ||
ಮಲಗಾಕ್ ಸೊಳ್ಳೇ ಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಪಟಿ ಕೊಟ್ಟಿ
ಪಕ್ಕಾಗ್ ಗಂದದ್ ದೂಪ ಆಕ್ದಂಗ್
ಮಡಿಕೇರೀಮೇಲ್ ಮಂಜು || ೩ ||
ಮಂಜಿನ್ ಮುಸುಕಿನ್ ಕಾವಲ್ನಲ್ಲಿ
ಒಣಗಿದ್ ಉದ್ದಾನೆ ಉಲ್ನಲ್ಲಿ
ಒಳಗೇ ಏನೋ ಸರದೋದಂಗೆ
ಅಲುಗಾಡ್ತಿತ್ತು ಮಂಜು || ೪ ||
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಣದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೇ ಅಂಗಂಗೇನೇ
ಗಸ್ತಾಕ್ತಿತ್ತು ಮಂಜು || ೫ ||
ಸೂರ್ಯನ್ ಕರೆಯೋಕ್ ಬಂದ್ ನಿಂತೋರು
ಕೊಡಗೀನ್ ಎಲ್ಲಾ ಪೂವಮ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು || ೬ ||
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು || ೭ ||
ಅಗಲೇ ಬರಲಿ ರಾತ್ರೆ ಬರಲಿ
ಬಿಸಿಲು ನೆಳ್ಗು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
ಮಡಿಕೇರೀಗೆ ಮಂಜು || ೮ ||
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋಂತಿತ್ತು
ಮಡಿಕೇರೀಗೆ ಮಂಜು || ೯ ||